ನಿಟ್ಟೂರು ಶ್ರೀನಿವಾಸರಾವ್ (೨೪ ಆಗಸ್ಟ್ ೧೯೦೩ – ೧೨ ಆಗಸ್ಟ್ ೨೦೦೪) ಅವರು ಗಾಂಧಿವಾದಿಯಾಗಿ ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡಿದ್ದವರು. ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿದ್ದ ಇವರು ಕೇಂದ್ರ ಜಾಗೃತ ಆಯೋಗದ ಮೊದಲ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕೆಲಕಾಲ ಅಂದಿನ ಮೈಸೂರು ರಾಜ್ಯದ ಪ್ರಭಾರ ರಾಜ್ಯಪಾಲರೂ ಆಗಿದ್ದ ಇವರು ಮಹಾತ್ಮ ಗಾಂಧಿಯವರ ಆತ್ಮಕತೆಯನ್ನು ಕನ್ನಡಕ್ಕೆ ತಂದವರಲ್ಲಿ ಮೊದಲಿಗರು. == ಪ್ರಾರಂಭಿಕ ಜೀವನ == ನಿಟ್ಟೂರು ಶ್ರೀನಿವಾಸರಾಯರು ಬೆಂಗಳೂರಿನಲ್ಲಿ ಹುಟ್ಟಿದರೂ ಅವರ ತಂದೆ ಶಾಲಾ ಶಿಕ್ಷಕರಾಗಿದ್ದುರಿಂದ ಹೊಸದುರ್ಗ, ಚಳ್ಳಕೆರೆ, ಮತ್ತು ಶಿವಮೊಗ್ಗದಲ್ಲಿ ವಿದ್ಯಾಭ್ಯಾಸ ಮಾಡಿದರು. ಆಮೇಲೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ವಿಜ್ಞಾನ ಪದವಿ ಪಡೆದು ನ್ಯಾಷನಲ್ ಪ್ರೌಢಶಾಲೆಯಲ್ಲಿ ಶಿಕ್ಷಕರಾದರು. ಕೆಲಕಾಲದ ನಂತರ ಮದ್ರಾಸ್ ಕಾನೂನು ಕಾಲೇಜು ಸೇರಿ ೧೯೨೭ರಲ್ಲಿ ಕಾನೂನು ಪದವೀಧರರಾದರು. == ನಿಟ್ಟೂರು ಶ್ರೀನಿವಾಶ್ == === ಕಾನೂನು === ಬೆಂಗಳೂರಿನಲ್ಲಿ ವಕೀಲಿವೃತ್ತಿಯಲ್ಲಿ ತೊಡಗಿದ ಇವರು ೧೯೫೨ರಲ್ಲಿ ಮೈಸೂರು ರಾಜ್ಯದ ಬಾರ್ ಕೌನ್ಸಿಲಿನ ಮೊದಲ ಅಧ್ಯಕ್ಷರಾಗಿ ಆಯ್ಕೆಯಾದರು. ಕೆಂಗಲ್ ಹನುಮಂತರಾಯರು ಮುಖ್ಯಮಂತ್ರಿಗಳಾಗಿದ್ದಾಗ ಇವರು ರಾಜ್ಯದ ಅಡ್ವೊಕೇಟ್ ಜನರಲ್ ಆಗಿ ನೇಮಿತರಾದರು. ೧೯೬೧ರಲ್ಲಿ ರಾಜ್ಯ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯೂ ಆದರು. ೧೯೬೪ರ ಫೆಬ್ರವರಿಯಲ್ಲಿ ಪ್ರಧಾನಿ ಪಂ. ಜವಾಹರಲಾಲ್ ನೆಹರು ಕೇಂದ್ರ ಜಾಗೃತ ಆಯೋಗವನ್ನು ರಚಿಸಿದಾಗ ನಿಟ್ಟೂರರು ಅದರ ಮೊದಲ ಆಯುಕ್ತರಾಗಿ ನೇಮಕಗೊಂಡರು. === ಸ್ವಾತಂತ್ರ್ಯ ಚಳುವಳಿ === ನಿಟ್ಟೂರರು ತಮ್ಮ ೧೮ನೇ ವಯಸ್ಸಿನಲ್ಲೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿ ಚಳವಳಿಗೆ ಧುಮುಕಿದರು. ಕಾಂಗ್ರೆಸ್ಸಿನ ಮೈಸೂರುಪ್ರಾಂತ್ಯ ವಿಭಾಗದ ಚಟುವಟಿಕೆಗಳಲ್ಲಿ ಶ್ರೀನಿವಾಸರಾಯರು ಪೂರ್ಣರೂಪದಲ್ಲಿ ತೊಡಗಿಸಿಕೊಂಡರು ಮತ್ತು ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದರು.. ಕೆಲಕಾಲ ಅವರು ಧಾರವಾಡದ ಕಾಂಗ್ರಸ್ ಘಟಕವನ್ನು ಮುನ್ನಡೆಸಿದರು. ೧೯೪೨ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಅವರು ನೇತಾರರಾದ ಕಮಲಾದೇವಿ ಚಟ್ಟೋಪಾಧ್ಯಾಯ, ಆರ್ ಆರ್ ದಿವಾಕರ ಮತ್ತು ಯು ಎಸ್ ಮಲ್ಯ ಮುಂತಾದವರಿಗೆ ಆಶ್ರಯ ಕಲ್ಪಿಸಿದರು. === ಗಾಂಧಿಯವರ ಪ್ರಭಾವ === ೧೯೨೭ರಲ್ಲ ಗಾಂಧಿಯವರು ಬೆಂಗಳೂರಿಗೆ ಭೇಟಿಯಿತ್ತಾಗ ನಿಟ್ಟೂರರು ಅವರ ಆತ್ಮಕತೆಯನ್ನು ಅನುವಾದಿಸಲು ಅನುಮತಿ ಬೇಡಿದರು. ಅವರು ಮತ್ತು ಅವರ ಪತ್ನಿ ಇಬ್ಬರೂ ಸೇರಿ ಮಾಡಿದ ಆ ಅನುವಾದವು ಕನ್ನಡ ದೈನಿಕಗಳಾದ ವಿಶ್ವಕರ್ನಾಟಕ ಮತ್ತು ಲೋಕಮತಗಳಲ್ಲಿ ಧಾರಾವಾಹಿಯಾಗಿ ಮೂಡಿಬಂತು. ಆ ಅನುವಾದಕ್ಕೆ ಅವರು ಸತ್ಯಶೋಧನೆ ಎಂಬ ಶೀರ್ಷಿಕೆ ನೀಡಿದರು. ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷರಾಗಿ ಹಾಗೂ ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷರಾಗಿಯೂ ಅವರು ದುಡಿದರು. ಖಾದಿ ಪ್ರಚಾರಕ್ಕಾಗಿ ಖಾದಿ ಘಟಕವನ್ನೂ ಪ್ರಾರಂಭಿಸಿದರು. === ಸಾಹಿತ್ಯ ಸೇವೆ === ನಿಟ್ಟೂರು ಶ್ರೀನಿವಾಸರಾಯರು ಸತ್ಯಶೋಧನ ಪ್ರಕಟಣ ಮಂದಿರ ಹಾಗೂ ಸತ್ಯಶೋಧನ ಪುಸ್ತಕ ಮಂದಿರಗಳನ್ನು ಸ್ಥಾಪಿಸಿ ಹಲ ಪುಸ್ತಕಗಳನ್ನು ಹೊರತಂದರು. ಶಿವರಾಮ ಕಾರಂತರ ಬಾಲಪ್ರಪಂಚವು ಇದೇ ಸಂಸ್ಥೆಯಿಂದ ಪ್ರಕಟಗೊಂಡಿತು. ಅದೇ ರೀತಿ ಸಿ ಕೆ ವೆಂಕಟರಾಮಯ್ಯ, ಕುವೆಂಪು, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಹಾಗೂ ಜಿ ಪಿ ರಾಜರತ್ನಂ ಅವರ ಕೃತಿಗಳೂ ಬೆಳಕು ಕಂಡವು. ಡಿವಿಜಿಯವರು ನಿಟ್ಟೂರರ ಮೇಲೆ ತುಂಬ ಪ್ರಭಾವ ಬೀರಿದ್ದರು. ಡಿವಿಜಿಯರವರ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಸೇರಿದ ಅವರು ಮುಂದೆ ಅದರ ಗೌರವ ಕಾರ್ಯದರ್ಶಿಯೂ ಆದರು. ಶಾಲೆಗಳಲ್ಲಿ ಕನ್ನಡ ಮಾಧ್ಯಮದ ಜಾರಿಗೆ ಅವರು ಅಪಾರವಾಗಿ ಶ್ರಮಿಸಿದರು. === ಕೊನೆಯ ದಿನಗಳು === ನಿಟ್ಟೂರರ ಸಮಾಜಸೇವೆ ಹಾಗೂ ಸಾಹಿತ್ಯ ಸೇವೆಯನ್ನು ಗುರುತಿಸಿದ ಕರ್ನಾಟಕ ರಾಜ್ಯಸರ್ಕಾರವು ಅವರನ್ನು ವಿಶೇಷವಾಗಿ ಗೌರವಿಸಿತಲ್ಲದೆ ಬೆಂಗಳೂರಿನ ಪ್ರಮುಖ ರಸ್ತೆಯೊಂದಕ್ಕೆ ಅವರ ಹೆಸರನ್ನೇ ಇಟ್ಟಿದೆ. ೨೦೦೨ರಲ್ಲಿ ಸಾಹಿತ್ಯ ಮತ್ತು ಮಾನವೀಯ ಮೌಲ್ಯವರ್ಧನೆಯ ಕ್ಷೇತ್ರದಲ್ಲಿನ ಅವರ ಕೊಡುಗೆಗಾಗಿ ರಾಜ್ಯ ಸರಕಾರ ಅವರನ್ನು ಗೌರವಿಸಿತು. ಅವರು ಹಿರಿಯ ನಾಗರಿಕರ ಅಭ್ಯುದಯಕ್ಕಾಗಿ ಪರಿಶ್ರಮಿಸುವ ಹಿರಿಯ ನಾಗರಿಕರ ವೇದಿಕೆಯನ್ನೂ ಸೇರಿದರು. ಶ್ರೀನಿವಾಸರಾಯರು ಸಂಗೀತದಲ್ಲೂ ಅಮಿತ ಆಸಕ್ತಿಯನ್ನು ಹೊಂದಿದವರಾಗಿದ್ದರು. ಅವರು ಬೆಂಗಳೂರಿನಲ್ಲಿ ಆನದ್ಧವಾದ್ಯ ಕಲೆಯ ಉತ್ತೇಜನಕ್ಕಾಗಿ ರೂಪುಗೊಂಡ ಆನದ್ಧವಾದ್ಯ ಕಲಾಕೇಂದ್ರದ ಅಧ್ಯಕ್ಷರಾಗಿದ್ದರು. ನೂರು ವರ್ಷಗಳ ತುಂಬು ಜೀವನ ನಡೆಸಿದ ಅವರು ೧೨ನೇ ಅಗಸ್ಟ್ ೨೦೦೪ರಲ್ಲಿ ನಿಧನ ಹೊಂದಿದರು. == ಉಲ್ಲೇಖಗಳು == == ಬಾಹ್ಯಸಂಪರ್ಕಗಳು == ಉಸಿರುಗಟ್ಟಿಸುವ ನಗರಿಯಲ್ಲಿ ಉದ್ಯಾನವಾಗಿದ್ದವರು ನಿಟ್ಟೂರು ಶ್ರೀನಿವಾಸರಾವ್ 2016-03-06 ವೇಬ್ಯಾಕ್ ಮೆಷಿನ್ ನಲ್ಲಿ. ಮೈಸೂರಿನಲ್ಲಿ ಇನ್ನೊಂದು ಹಣತೆ ಬೆಳಗತೊಡಗಿದೆ ನೂರಕ್ಕೆ ಕಾಲಿಟ್ಟ ನಿಟ್ಟೂರು ಶ್ರೀನಿವಾಸರಾಯರ ಕಿರು ಸಂದರ್ಶನ ಬೆಂಗಳೂರಿನ ‘ಸಾಂಸ್ಕೃತಿಕ ಜೀವನಾಡಿ’ ಶತಾಯುಷಿ ನಿಟ್ಟೂರು ಇನ್ನಿಲ್ಲ